ಟ್ರಿಪ್ಯಾಂಗ್
	ಎಕಿನೊಡರ್ಮೇಟ ವಿಭಾಗದ ಹಾಲೋತುರಾಯ್ಡಿಯ ಅಥವಾ ಸಮುದ್ರಸೌತೆ ವರ್ಗಕ್ಕೆ ಸೇರಿದ ಜೀವಿ. ಇದರ ದೇಹ ನೀಳವಾಗಿ ಉರುಳೆಯಾಕಾರದಲ್ಲಿದೆ. ಬಾಯಿ ಒಂದು ತುದಿಯಲ್ಲೂ ಮಲದ್ವಾರ ಇನ್ನೊಂದು ತುದಿಯಲ್ಲೂ ಉಂಟು. ನೀರಿನ ತಳದಲ್ಲಿ ದೇಹದ ಒಂದು ಪಾಶ್ರ್ವವನ್ನು ಕೆಳಮುಖಮಾಡಿ ಬಿದ್ದಿರುತ್ತದೆ. ದೇಹದ ಮಾಂಸಭರಿತ ಗೋಡೆಗೆ ಸುಣ್ಣಕಲ್ಲು ಮರಳು ಮತ್ತು ಕಸಕಡ್ಡಿಗಳ ಚೂರುಗಳು ಅಂಟಿದಂತಿರುತ್ತವೆ. ಆದರೆ ಅದರಲ್ಲಿ ಪೆಡಿಸೆಲ್ಲೇರಿಯ ಮುಳ್ಳು, ಶಿಲಕೆ ಮುಂತಾದ ಅಂಗಗಳಿಲ್ಲ. ಬಾಯಿಯ ಸುತ್ತ ಸ್ಪರ್ಶಕಗಳುಂಟು. ಒಂದೊಂದು ಕವಲೊಡೆದಿವೆ. ದೇಹದ ಇತರ ಭಾಗಗಳಲ್ಲಿ ಕೊಳವೆಗಾಲು (ಟ್ಯೂಬ್‍ಫೀಟ್) ಮತ್ತು ಆಂಬುಲೇಕ್ರಲ್ ಸ್ಪರ್ಶಕಗಳಿವೆ. ದಕ್ಷಿಣ ಪೆಸಿಫಿಕ್ ಸಾಗರದ ದ್ವೀಪಗಳು ದಕ್ಷಿಣ ಚೀನ, ಕ್ವೀನ್ಸ್ ಲ್ಯಾಂಡಿನ ತೀರಪ್ರದೇಶ-ಈ ಕಡೆಗಳಲ್ಲಿ ಒಣ ಸೌತೆ ಹುಳುಗಳನ್ನು ಬೇಕ್-ಡಿ-ಮರ್ ಅಥವಾ ಟ್ರಿಪ್ಯಾಂಗ್ ಎಂದು ಕರೆಯುವರು. ಇವನ್ನು ಸಂಗ್ರಹಿಸಿಟ್ಟುಕೊಂಡು ಆಹಾರವಾಗಿ ಬಳಸುವರು. ಇವುಗಳಲ್ಲಿ ಕೆಲವು ಜಾತಿಯವು ವಿಷಕಾರಿಯಾಗಿರುತ್ತವೆ. ದಕ್ಷಿಣಸಾಗರದ ನಿವಾಸಿಗಳು ಮೀನು ಹಿಡಿಯಲು ಗಾಳದ ಆಕರ್ಷಕವನ್ನಾಗಿ ಇವನ್ನು ಬಳಸುವರು. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ